Home Blog

ಮಂಗಳೂರಿನಲ್ಲಿ ಹೈಕೋರ್ಟು ಸಂಚಾರಿ ಪೀಠ ಸ್ಥಾಪನೆಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುವುದಾಗಿ ಮುಖ್ಯ ನ್ಯಾಯಮೂರ್ತಿ ವಿಧು ಭಖ್ರು ಭರವಸೆ 

ಬಂಟ್ವಾಳ: ಮಂಗಳೂರಿನಲ್ಲಿ ಹೈಕೋರ್ಟು ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆಗಾಗಿ ಸಮಿತಿ ರಚಿಸುವುದಾಗಿ ಭರವಸೆ ನೀಡಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಧು ಭಖ್ರು ಅವರು ಅಗತ್ಯವಿದ್ದರೆ ಖುದ್ದು ತಾನೇ ಭೇಟಿ ನೀಡಿ ಲಭ್ಯವಿರುವ ಮೂಲಸೌಕರ್ಯ ಮತ್ತು ಹೆಚ್ಚುವರಿ ಆಗತ್ಯಗಳ ಕುರಿತು ವರದಿ ಪಡೆಯುವುದಾಗಿ ಅವರನ್ನು ಭೇಟಿಯಾದ ಮಂಗಳೂರಿನ ವಕೀಲರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಮಂಗಳೂರಿನ ಹಿರಿಯ ವಕೀಲರು,ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ನೊರೊನ್ಹಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್. ವಿ. ರಾಘವೇಂದ್ರ ರಾವ್ ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಎಂ. ಡಿಕೋಸ್ಟ ಅವರನ್ನೊಳಗೊಂಡ ನಿಯೋಗವು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಧು ಭಖ್ರು ಅವರನ್ನು ಭೇಟಿಯಾಗಿ ಕರಾವಳಿ ಕರ್ನಾಟಕದಲ್ಲಿ ಶಾಶ್ವತ ಹೈಕೋರ್ಟು ಪೀಠ ಸ್ಥಾಪನೆ ಆಗುವ ತನಕ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ನ್ಯಾಯಾಮೂರ್ತಿಗಳು ಈ ಬಗ್ಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬಳಿಕ ಹೊರಾಟ ಸಮಿತಿಯ ನಿಯೋಗ ಜಿಲ್ಲೆಯ ಅಡಳಿತಾತ್ಮಕ ನ್ಯಾಯಧೀಶರಾದ ಎಚ್. ಟಿ. ನರೇಂದ್ರ ಪ್ರಸಾದ್‌ ಹಾಗೂ ದ.ಕ.ಜಿಲ್ಲೆಯವರೇ ಆದ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನ್ಯಾಯಧೀಶರು ಸಕರಾತ್ಮಕವಾಗಿ ಸ್ಪಂದಿಸಿ, ಹೈಕೋರ್ಟ್ ಪೀಠ ಸ್ಥಾಪನೆಗೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಸಂದರ್ಭ ಹೈಕೋರ್ಟ್ ವಕೀಲರಾದ ಅಜೇಯ್ ಮೆಟ್ರಿಕ್ ನೊರೊನ್ಹಾ ಜೊತೆಗಿದ್ದರು.

ಕರಾವಳಿ ಪ್ರದೇಶದಲ್ಲಿ ಕರ್ನಾಟಕ ಹೈಕೋರ್ಟ್‌ ಪೀಠ ಸ್ಥಾಪನೆಗೆ ಬಹುಕಾಲದಿಂದ ಬೇಡಿಕೆ ಇದ್ದು,ಈಗಾಗಲೇ ಶಾಶ್ವತ ಹೈಕೋರ್ಟ್ ಪೀಠ ಹೋರಾಟ ಸಮಿತಿ ರಚಿಸಲಾಗಿ ಹಲವಾರು ಸಭೆಗಳು ವಿವಿಧ ಹಂತದ ಹೋರಾಟ ,ಪ್ರಾಧಿಕಾರಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆಯಲ್ಲದೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಅಬ್ದುಲ್ ನರ್ಜಿರ್ ಅವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಮಾರ್ಗದರ್ಶನವನ್ನು ಪಡೆದಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಅವರು ಮಂಗಳೂರಿನಲ್ಲಿ ಶೀಘ್ರವಾಗಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Bantwal : ಪೊಲೀಸ್ ಇಲಾಖೆಯ ಕಚೇರಿ ನಿರ್ಮಾಣಕ್ಕೆ ಮೀಸಲು ಇರಿಸಲಾಗಿದ್ದ ಜಾಗ ವೀಕ್ಷಿಸಿದ ಡಿ‌ಜಿ ಸಲೀಂ

ಬಂಟ್ವಾಳ: ಕಾವಳಪಡೂರು ಗ್ರಾಮದ ಬರ್ಕಟ ಎಂಬಲ್ಲಿ ಪೋಲೀಸ್ ಇಲಾಖೆಯ ಕಚೇರಿ ನಿರ್ಮಾಣಕ್ಕೆ ಮೀಸಲು ಇರಿಸಲಾಗಿದ್ದ ಜಾಗವನ್ನು ಪೋಲೀಸ್ ಮಹಾನಿರ್ದೇಶಕ (ಡಿ‌.ಜಿ.) ಸಲೀಂ ಅವರು ವೀಕ್ಷಿಸಿದರು.

ಸಶಸ್ತ್ರ ಮೀಸಲು ಪಡೆಯ ಕಚೇರಿ ಹಾಗೂ ಮೈದಾನ ನಿರ್ಮಿಸಲು ಸುಮಾರು 14 ಎಕರೆ ಜಮೀನು ಮಂಜೂರಾಗಿದ್ದು, ಈ ಜಾಗವನ್ನು ಅವರು ವೀಕ್ಷಿಸಿ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಬೆಂಜನಪದವಿನಲ್ಲಿರುವ ಸ್ಪೆಷಲ್ ಆಕ್ಷನ್ ಪೋರ್ಸು (ಎಸ್.ಐ.ಎಫ್) ಕಚೇರಿಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಐಜಿಪಿ ಅಮಿತ್ ಸಿಂಗ್, ಎಸ್. ಪಿ.ಡಾ| ಅರುಣ್ ಹಾಗೂ ಹೌಸಿಂಗ್ ಬೋರ್ಡ್ ಸೊಸೈಟಿಯ ಅಧಿಕಾರಗಳು ಉಪಸ್ಥಿತರಿದ್ದರು.

ಹವ್ಯಾಸಿ ರಂಗಭೂಮಿ ಕಲಾವಿದ ಆತ್ಮಹತ್ಯೆ : ಪ್ರಕರಣ ದಾಖಲು

ಬಂಟ್ವಾಳ: ಹವ್ಯಾಸಿ ರಂಗಭೂಮಿ ಕಲಾವಿದರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಉಳ್ಳಾಲ ತಾಲೂಕಿನ ಇರಾ ಗ್ರಾಮದ ಪಾತ್ರಾಡಿ ನಿವಾಸಿ ಮಿಥುನ್ ಪೂಜಾರಿ ಮಂಚಿ (40) ಎಂದು ಗುರುತಿಸಲಾಗಿದೆ.

ಮೃತರು ಪತ್ನಿ ಹಾಗೂ ಎರಡು ವರ್ಷದ ಮಗುವನ್ನು ಅಗಲಿದ್ದಾರೆ.

ಸ್ಥಳೀಯವಾಗಿ ಕೆಲವು ನಾಟಕ ತಂಡಗಳಲ್ಲಿ ಕಲಾವಿದನಾಗಿ ಅವರು ಅಭಿನಯಿಸುತ್ತಿದ್ದರು. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಅವರು ಮಂಚಿ ಸಮೀಪದಲ್ಲಿದ್ದ ಹಳೆಯ ಮನೆಗೆ ತೆರಳಿ ತೋಟಕ್ಕೆ ನೀರು ಬಿಡುವ ಕೆಲಸ ಕೆಲವೊಮ್ಮೆ ಮಾಡುತ್ತಾರೆ. ಇರಾದಲ್ಲಿ ಹೊಸ ಮನೆ ನಿರ್ಮಿಸಿದ ಬಳಿಕ ಹಳೆಯ ಮನೆಯಲ್ಲಿ ಯಾರೂ ವಾಸವಾಗಿಲ್ಲ. ಅದರಂತೆ ಸೋಮವಾರ ಬೆಳಗ್ಗೆ ಮಂಚಿಯ ಹಳೆ ಮನೆಗೆ ಹೋದವರು ಸಂಜೆಯವರೆಗೂ ವಾಪಾಸಾಗದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸ್ಥಳೀಯರು ಗಮನಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಗಮನಕ್ಕೆ ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಚಿ-ಕೊಳ್ನಾಡು ಗೌಸಿಯಾ ಎಸೋಸಿಯೇಶನ್ ವತಿಯಿಂದ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ, ಸನ್ಮಾನ

ಬಂಟ್ವಾಳ : ಮಂಚಿ-ಕೊಳ್ನಾಡು ಗೌಸಿಯಾ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವು ಇಲ್ಲಿನ ಮರ್‍ಹೂಂ ಸುರಿಬೈಲು ಉಸ್ತಾದ್ ವೇದಿಕೆಯಲ್ಲಿ ನಡೆಯಿತು.

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಕಾರ್ಯಕ್ರಮ ಉದ್ಘಾಟಿಸಿದರು.

ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸಿದರು. ಮಂಚಿ ಮುಹಮ್ಮದಿಯಾ ಜುಮಾ ಮಸೀದಿಯ ಇಬ್ರಾಹಿಂ ಮದನಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ರಮಾನಾಥ ರೈ, ಸಾಲೆತ್ತೂರು ನಿತ್ಯಾಧರ್ ಚರ್ಚ್ ಧರ್ಮಗುರು ರೆ. ಫಾ. ಮನೋಜ್ ಫುರ್ಟಾಡೋ, ಅಸ್ಗರ್ ಅಲಿ ಮದನಿ, ಮುಹಮ್ಮದ್ ಅಲಿ ಸಖಾಫಿ ಅಶ್-ಅರಿಯ್ಯ, ಅಬೂಬಕ್ಕರ್ ಲತೀಫ್ ಎಣ್ಮೂರು, ಶಮ್ಮಾಸ್ ಅಶ್ಶಾಫೀ ಮರಕ್ಕಿಣಿ, ಅಬ್ದುಲ್ ಖಾದರ್ ದಾರಿಮಿ ಕೊಡಂಗಾಯಿ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಕೆಡಿಪಿ ಸದಸ್ಯ ಹಾಜಿ ಎ.ಬಿ.ಅಬ್ದುಲ್ಲ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಬಂಟ್ವಾಳ ಪುರಸಭಾ ನಿಕಟಪೂರ್ವ ಉಪಾಧ್ಯಕ್ಷ ಮೂನಿಶ್ ಅಲಿ, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಪ್ರಾಂಶುಪಾಲ ಎಂ.ಡಿ.ಮಂಚಿ, ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ ಅಶ್ರಫ್ ಪಾಣೆಮಂಗಳೂರು, ಬೋಳಂತೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ರೈ ಬೋಳಂತೂರು, ಕೊಳ್ನಾಡು ಗ್ರಾ.ಪಂ.ಮಾಜಿ ಸದಸ್ಯ ಅಬೂಬಕ್ಕರ್ ಸಿ.ಎಚ್, ಸಜಿಪಮೂಡ ಗ್ರಾ.ಪಂ.ಸದಸ್ಯ ಕರೀಂ ಬೊಳ್ಳಾಯಿ, ಉದ್ಯಮಿಗಳಾದ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ, ಚೊಯಿಸ್ ಗೋಲ್ಡ್ ಅಶ್ರಫ್ ನಾಡಾಜೆ, ಶಿಯಾನ್, ಶರೀಫ್ ತಲಕ್ಕಿ, ಅಬ್ದುಲ್ ರಹಿಮಾನ್ ನಿರ್ಬೈಲು, ಪ್ರಮುಖರಾದ ನಾರಾಯಣ ಶೆಟ್ಟಿ ಕುಲ್ಯಾರು, ನಾರಾಯಣ ಭಟ್ ನೂಜಿಬೈಲು, ನಾರಾಯಣ ಭಟ್ ಕಯ್ಯೂರು, ರಾಮ್ ಪ್ರಸಾದ್ ರೈ ತಿರುವಾಜೆ, ನ್ಯಾಯವಾದಿ ಮೋಹನ್ ಗುಂಟೂರು ಮೊದಲಾದವರು ಭಾಗವಹಿಸಿದ್ದರು. ನಿಸಾರ್ ಮಂಚಿ, ಎಂ.ಎಚ್.ಫ್ಯಾಮಿಲಿ, ದಾವೂದ್ ಕೈಯೂರ್, ರಫೀಕ್ ಸರೀತ್ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು.

ಗೌಸಿಯಾ ಎಸೋಸಿಯೇಶನ್ ಅಧ್ಯಕ್ಷ ಅಬೂಬಕ್ಕರ್ ಕೈಯೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೂಸಾ, ದಫ್ ಸ್ಪರ್ಧೆ ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಜಿ ಮಂಚಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಂಚಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿವಿ ಡಾಕ್ಟರೇಟ್ ಪದವಿ ಪುರಸ್ಕೃತ ಅಕ್ಷರ ಸಂತ ಡಾ ಹರೇಕಳ ಹಾಜಬ್ಬ ಹಾಗೂ ಸಂಘಟಕ ಲತೀಫ್ ಮಾರಿಪಳ್ಳ ಅವರನ್ನು ಸನ್ಮಾನಿಸಲಾಯಿತು.

ಮಹಮ್ಮದ್ ಇಕ್ಬಾಲ್ ಮಂಚಿ ಸ್ವಾಗತಿಸಿ, ಮುಹಮ್ಮದ್ ಮಂಚಿ ಪ್ರಸ್ತಾವನೆಗೈದರು. ಅಬೂಬಕ್ಕರ್ ಕೈಯೂರ್ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

ತಾಜುಲ್ ಹುದಾ ರೆಂಜಾಡಿ ತಂಡಕ್ಕೆ ದಫ್ ಪ್ರಶಸ್ತಿ

ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ, ಬೆಳ್ಮ-ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ಪ್ರಥಮ, ಕಟಪಾಡಿ-ಮಣಿಪುರದ ಖಲಂದರ್ ಷಾ ದಫ್ ತಂಡ ದ್ವಿತೀಯ, ಕನ್ನಂಗಾರ್ ಇಶಾ-ಅತಿಸ್ಸುನ್ನ ದಫ್ ತಂಡ ತೃತೀಯ ಹಾಗೂ ಉಳ್ಳಾಲ-ಅಕ್ಕರೆಕರೆ ಅಲ್-ಜಝೀರಾ ದಫ್ ತಂಡ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ತಾಜುಲ್ ಹುದಾ ದಫ್ ತಂಡದ ಆಸಿಫ್ ಸಾಲ್ಮರ ನೇತೃತ್ವದ ಹಾಡುಗಾರರು ಹಾಡುಗಾರಿಕೆ ಪ್ರಶಸ್ತಿ ಪಡೆದುಕೊಂಡರು.

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಬಂಟ್ವಾಳ : ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮೇ 12 ರಂದು ಪಾಣೆಮಂಗಳೂರು ಸಮೀಪದ ಎಸ್ ಎಸ್ ಹಾಲ್ ನಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಬಿ.ಸಿ.ರೋಡಿನ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು ಎಚ್., ಸಮ್ಮೇಳನದ ರೂಪುರೇಷೆ ಹಾಗೂ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಮಾತನಾಡಿ, ಬ್ಯಾರಿ ಆಂದೋಲನ, ಅಕಾಡೆಮಿಗಾಗಿ ಶ್ರಮಿಸಿದ ನಾಯಕರು ಹಾಗೂ ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ನೆನಪಿಸಿಕೊಂಡ ಅವರು ಮುಂದೆ ನಡೆಯುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.

ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಂಚಾಲಕ ಪಿ.ಎ. ರಹೀಂ, ಕೋಶಾಧಿಕಾರಿ ಮುಹಮ್ಮದ್ ಸಾಗರ್, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು.

ಬ್ಯಾರಿ ಪ್ರಮುಖರಾದ ಯೂಸುಫ್ ಕರಂದಾಡಿ, ಮೂನಿಷ್ ಅಲಿ ಬಂಟ್ವಾಳ, ಹನೀಫ್ ಬಗ್ಗುಮೂಲೆ, ಅಬ್ದುಲ್ ಮಜೀದ್ ಕಡೆಗೋಳಿ, ಮಹಮ್ಮದ್ ನಂದಾವರ, ಇಬ್ರಾಹಿಂ ಕೈಲಾರ್, ಅಬೂಬಕರ್ ಅಮ್ಮುಂಜೆ, ಚಿಕ್ ಖಲೀಲ್ ಬಂಟ್ವಾಳ, ಪಿ.ಮಹಮ್ಮದ್ ಪಾಣೆಮಂಗಳೂರು, ಅಲ್ತಾಫ್ ಡೈಮಂಡ್, ಉಮರ್ ಮಂಚಿ, ಮುಹಮ್ಮದ್ ಸುರಿಬೈಲು, ಯು.ಮುಸ್ತಫಾ ಆಲಡ್ಕ, ಹನೀಫ್ ನಂದರಬೆಟ್ಟು ಮೊದಲಾದವರು ವಿವಿಧ ಸಲಹೆ ನೀಡಿದರು.

ಬ್ಯಾರಿ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯಅಬೂಬಕ್ಕರ್ ಅನಿಲಕಟ್ಟೆ ವಂದಿಸಿದರು.

ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅರ್ಜಿ ಆಹ್ವಾನ : ಮೇ 10 ಕೊನೆಯ ದಿನಾಂಕ

ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 890 ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದ್ದು,ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ನಂತರ ನಿಗದಿತ ಶುಲ್ಕವನ್ನು ಪಾವತಿಸಲು ಮೇ 12 ರವರೆಗೆ ಕಾಲಾವಕಾಶ ನೀಡಲಾಗಿದೆ.

ಈ ನೇಮಕಾತಿಯಲ್ಲಿ ಒಟ್ಟು 890 ಹುದ್ದೆಗಳಿದ್ದು, ಇವುಗಳಲ್ಲಿ ಕೃಷಿ ಅಧಿಕಾರಿ (AO) ಹುದ್ದೆಗಳು ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳು ಸೇರಿವೆ. ಈ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (KK) ಮತ್ತು ಉಳಿಕೆ ಮೂಲ ವೃಂದ (RPC) ಎಂದು ವಿಂಗಡಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಕೃಷಿ (B.Sc Agriculture), ಬಿ.ಟೆಕ್ ಬಯೋಟೆಕ್ ಅಥವಾ ಕೃಷಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಯನ್ನು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ನಿಯಮದಂತೆ ಎಸ್‌ಸಿ/ಎಸ್‌ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಮತ್ತು ವಿಧವೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

SSLCಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ನ್ಯಾ.ಇ.ಎಸ್.ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

2026ನೇ ಸಾಲಿನ SSLC ಪರೀಕ್ಷೆಯಲ್ಲಿ ಹಿಂದಿ  ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಅಂಕದ ಬದಲಿಗೆ ಗ್ರೇಡ್ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿತ್ತು.

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ಸೂರಿಕುಮೇರು : ನವೀಕೃತ ಬದ್ರಿಯಾ ಜುಮ್ಮಾ ಮಸ್ಜಿದ್ ಉದ್ಘಾಟನೆ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ

ಮಾಣಿ : ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪವಿರುವ ನವೀಕೃತ ಬದ್ರಿಯಾ ಜುಮ್ಮಾ ಮಸೀದಿಯ ಉದ್ಘಾಟನಾ ಸಮಾರಂಭ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಎ.25 ಮತ್ತು 26  ನಡೆಯಲಿದೆ.

ಶನಿವಾರ ಮಗ್ರಿಬ್ ಬಳಿಕ ಪ್ರಮುಖ ವಾಗ್ಮಿ ಬಹು|ಹಂಝ ಮಿಸ್ಬಾಹಿ ಓಟ್ಟಪದವು ಪ್ರಭಾಷಣ ನಡೆಸಲಿದ್ದು ಆದಿತ್ಯವಾರ ಮಗ್ರಿಬ್ ಬಳಿಕ ನವೀಕೃತ ಮಸೀದಿ ಉದ್ಘಾಟನೆ ಮತ್ತು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದೆ.

ಬಹು|ಸಯ್ಯಿದ್ ಇಬ್ರಾಹಿಂ ಬಾದುಷಾ ತಂಙಳ್ ಬುಖಾರಿ ಅಲ್-ಅಝ್‌ಹರಿ ಆನೆಕಲ್ ರವರು ನೇತೃತ್ವ ನೀಡಲಿರುವರು,ಉಡುಪಿ ಚಿಕ್ಕಮಗಳೂರು, ಹಾಸನ,ಮತ್ತು ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಗಣ್ಯ ಉಪಸ್ಥಿತಿ ಇರುವುದು,ಎಸ್ ಎ ಇಸ್ಮಾಯಿಲ್ ಸೂರಿಕುಮೇರು ರವರ ಅಧ್ಯಕ್ಷತೆಯಲ್ಲಿ ಮು‌ಅಲ್ಲಿಂ ಆಶಿಕ್ ಹಿಶಾಮಿ ಸ್ವಾಗತಿಸಿ ಖತೀಬ್ ಕಲಂದರ್ ಶಾಫಿ ಮದನಿ ಕಾರ್ಯಕ್ರಮ ಉದ್ಘಾಟಿಸುವರು, ಸದರ್ ಮುಶ್ತಾಕ್ ಫೈಝಿ ಅಲ್ ಮ‌ಅ‌್‌ಬರಿ ನಿರೂಪಿಸುವ ಕಾರ್ಯಕ್ರಮದಲ್ಲಿ ಹಲವಾರು ಉಮರಾ ಮುಖಂಡರು ಸಾಮಾಜಿಕ ನಾಯಕರು ಭಾಗವಹಿಸಲಿರುವರು ಎಂದು ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bantwal : ವಾಕಿಂಗ್ ವೇಳೆ ಕುಸಿದು ಬಿದ್ದು KSRTC ಚಾಲಕ ಸಾವು 

ಬಂಟ್ವಾಳ : ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದು KSRTC  ಚಾಲಕರೋರ್ವರು ಸಾವನ್ನಪ್ಪಿದ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಡ್ಲೇ ಪಟೇಲ್ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಚಾಲಕನ ಭಾವ ಸದ್ದಾಂ ಹುಸೇನ್ ಎಂಬವರು ನೀಡಿದ ದೂರಿನಂತೆ, ಲಾಡ್ಲೇಪಟೇಲ್ ಅವರು ಸುಮಾರು 16 ವರ್ಷಗಳಿಂದ ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ಡಿಪೋದಲ್ಲಿ ಚಾಲಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಏ.18ರಂದು ಬೆಳಗ್ಗೆ ಕರ್ತವ್ಯ ಸಲ್ಲಿಸಿ ಡಿಪೋದ ವಿಶ್ರಾಂತಿ ಗೃಹದಲ್ಲಿ ವಿಶ್ರಾಂತಿ ಪಡೆದು, ಸಂಜೆ ಸುಮಾರು 7.15ಕ್ಕೆ ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದಿದ್ದಾರೆ. ಕೂಡಲೇ ಚಿಕಿತ್ಸೆಗೆ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ ಸಾವನ್ನಪ್ಪಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕ್ಯಾಂಪ್ಕೋ : ಇಂದಿನ ಅಡಿಕೆ, ಕೋಕಾ, ಕರಿಮೆಣಸು ದರಪಟ್ಟಿ..

ಮಂಗಳೂರು : ಕ್ಯಾಂಪ್ಕೋ ನಿಯಮಿತ ಮಂಗಳೂರು (ವಿಟ್ಲ ಶಾಖೆ) ಇಂದಿನ ಅಡಿಕೆ, ಕಾಳುಮೆಣಸು, ಕೋಕಾ ದರಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇಂದಿನ ದರಗಳ ವಿವರ ಈ ಕೆಳಗಿನಂತಿವೆ :

ಹೊಸ ಅಡಿಕೆ ಕೆ.ಜಿ.ಗೆ 410-475, ಚೋಲ್ ಅಡಿಕೆ 425-550, ಡಬಲ್ ಚೋಲ್ ಅಡಿಕೆ 430-550, ಹೊಸ ಪಟೋರಾ 345-400, ಹಳೆ ಪಟೋರಾ 345-405 ಉಳ್ಳಿ 160-290, ಕೋಕಾ 300-345, ಕರಿಗೋಟ್ 235-265, ಕೊಕ್ಕೊ ಹಸಿ 100-100, ಕೊಕ್ಕೊ ಒಣ 300-310, ಕರಿಮೆಣಸು 320-675